ಚೆನ್ನೈ:ತಿರುವಳ್ಳೂರು ಬಳಿ ಪ್ಯಾಸೆಂಜರ್ ಎಕ್ಸ್ ಪ್ರೆಸ್ ರೈಲು ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದು ರೈಲಿನ 2 ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದುಬಂದಿದೆ
ಮೈಸೂರು ದರ್ಭಾಂಗ ಪ್ಯಾಸೆಂಜರ್ ಎಕ್ಸ್‌ಪ್ರೆಸ್ (ಸಂಖ್ಯೆ 12578) ಆಂಧ್ರಪ್ರದೇಶದ ಕಡೆಗೆ ಹೋಗುತ್ತಿತ್ತು. ಗಂಟೆಗೆ 90 ಕಿ.ಮೀ ವೇಗದಲ್ಲಿ ತಿರುವಳ್ಳೂರು ಜಿಲ್ಲೆಯ ಕವರಪ್ಪೆಟ್ಟೈ ಸಮೀಪ ಬರುವಾಗ ಲೂಪ್ ಲೈನ್ ಪ್ರವೇಶಿಸಿ ಅಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಅನಿರೀಕ್ಷಿತವಾಗಿ ಡಿಕ್ಕಿ ಹೊಡೆದಿದೆ.
ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಪ್ಯಾಸೆಂಜರ್ ರೈಲಿನ 6 ಬೋಗಿಗಳು ಹಳಿ ತಪ್ಪಿವೆ. ಅವುಗಳಲ್ಲಿ 2 ಎಸಿ ಘಟಕಗಳು ಬೆಂಕಿಗೆ ಆಹುತಿಯಾಗಿವೆ. ಅಪಘಾತ ನಡೆದ ಸ್ಥಳ ಕತ್ತಲು ಪ್ರದೇಶವಾಗಿದ್ದು, ಏನಾಯಿತು ಎಂದು ಪ್ರಯಾಣಿಕರಿಗೆ ಕಾಣದಂತಾಯಿತು. ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ರಾತ್ರಿ ಆಗಿದ್ದರಿಂದ ಬೆಂಕಿ ನಂದಿಸುವುದು ಕಷ್ಟವಾಗಿತ್ತು.
ಅಪಘಾತದ ಬಗ್ಗೆ ಮಾಹಿತಿ ನೀಡಿದ ಸ್ಥಳೀಯರು ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಲ್ಲದೆ, ಅಲ್ಲಿನ ಜನರು ರೈಲ್ವೆ ಅಧಿಕಾರಿಗಳಿಗೆ ವಿವರ ನೀಡಿದ್ದಾರೆ.
ಬಳಿಕ ರೈಲ್ವೇ ಅಧಿಕಾರಿಗಳು ಹಾಗೂ ರೈಲ್ವೇ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಸಿಗ್ನಲ್ ವೈಫಲ್ಯದಿಂದ ಅಪಘಾತ ಸಂಭವಿಸಿರಬಹುದು ಎಂದು ತಿಳಿದುಬಂದಿದೆ.
ಜಿಲ್ಲಾಧಿಕಾರಿ ಮತ್ತಿತರರು ಸ್ಥಳ ಪರಿಶೀಲನೆ ನಡೆಸಿದರು. ರಕ್ಷಣಾ ಕಾರ್ಯಾಚರಣೆಗಳು ವೇಗವಾಗಿ ನಡೆಯುತ್ತಿವೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಲವರಿಗೆ ಹತ್ತಿರದ ಮದುವೆ ಮಂಟಪದಲ್ಲಿ ವಸತಿ ಕಲ್ಪಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಅರಕ್ಕೋಣಂನಿಂದ ಧಾವಿಸಿದೆ.
