ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕೃಷ್ಣಾ ನದಿ ನೆರೆ ನೀರು
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಕೋಲಾರ ಸಂಸದ ಮಲ್ಲೇಶ್ ಬಾಬು ಮನವಿ
ಆಂಧ್ರ ಗಡಿಯಲ್ಲಿರುವ HNSS ಯೋಜನೆ ಮೂಲಕ ಜಿಲ್ಲೆಗಳಿಗೆ ನೀರು ಹರಿಸಬೇಕು ಎಂದು ಕೋರಿಕೆ
ಜಿಲ್ಲೆಗಳ ನೀರಿನ ಬವಣೆಯ ಕುರಿತು ನಾಯ್ಡು ಅವರಿಗೆ ಮನವರಿಕೆ ಮಾಡಿಕೊಟ್ಟ ಮಲ್ಲೇಶ್ ಬಾಬು

*
ನವದೆಹಲಿ 10 ಫೆಬ್ರವರಿ 2026
ತೀವ್ರ ಜಲಕ್ಷಾಮಕ್ಕೆ ತುತ್ತಾಗಿರುವ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೃಷ್ಣಾ ನದಿಯಿಂದ ಹೆಚ್ಚುವರಿ ನೆರೆ ನೀರು ಹರಿಸುವ ಬಗ್ಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾದ ಎನ್. ಚಂದ್ರಬಾಬು ನಾಯ್ಡು ಅವರಿಗೆ ಕೋಲಾರ ಸಂಸದ ಮಲ್ಲೇಶ್ ಬಾಬು ಅವರು ಮನವಿ ಸಲ್ಲಿಸಿದರು.
ನವದೆಹಲಿಯಲ್ಲಿ ಮಂಗಳವಾರ ಸಂಸತ್ ಭವನದಲ್ಲಿರುವ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಕಚೇರಿಗೆ ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಲು ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಲ್ಲೇಶ್ ಬಾಬು ಅವರು ಮನವಿ ಪತ್ರ ಸಲ್ಲಿಸಿದರು.

ಕೃಷ್ಣಾ ನದಿಯಿಂದ ಸಮುದ್ರಕ್ಕೆ ಹರಿದು ಹೋಗುತ್ತಿರುವ ನೆರೆ ನೀರಿನಲ್ಲಿ ಸ್ವಲ್ಪ ಪ್ರಮಾಣವನ್ನು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸಬೇಕು. ಈ ನೀರನ್ನು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡಲಾಗುವುದು ಎಂದು ಅವರು ಮನವರಿಕೆ ಮಾಡಿಕೊಟ್ಟರು.
ಈಗಾಗಲೇ ಗಡಿಭಾಗದಲ್ಲಿ ಆಂಧ್ರ ಪ್ರದೇಶ ಸರ್ಕಾರವು ‘ಹಂದ್ರಿ ಸುಜಲಾ ಶ್ರವಂತಿ ಯೋಜನೆ’ (ಹೆಚ್.ಎನ್.ಎಸ್.ಎಸ್) ಯೋಜನೆಯ ಮೂಲಕ ಕರ್ನಾಟಕದ ಈ ಮೂರು ಜಿಲ್ಲೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೆಚ್ಚುವರಿ ನೆರೆ ನೀರನ್ನು ಕೊಡಬೇಕು. ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಶೀಲನೆ ನಡೆಸಬೇಕು ಎಂದು ಮಲ್ಲೇಶ್ ಬಾಬು ಅವರು ವಿನಂತಿಸಿದರು.
ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಆಂಧ್ರ ಪ್ರದೇಶದ ಗಡಿಯನ್ನು ಹಂಚಿಕೊಂಡಿರುವ ಜಿಲ್ಲೆಗಳಾಗಿದ್ದು, ಪಾಲಾರ್ ಮತ್ತು ಪೆನ್ನಾರ್ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುತ್ತವೆ. ಈ ಭಾಗದ ಜನರು ಅನೇಕ ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ, ಈ ಭಾಗದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಲಭ್ಯವಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ಮಾನವೀಯ ದೃಷ್ಟಿಯಿಂದ ನಮ್ಮ ಮನವಿಯನ್ನು ಪರಿಗಣಿಸಬೇಕು ಎಂದು ಅವರು ಕೋರಿದರು.
ನಿಮ್ಮ ಮನವಿಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸುವ ಭರವಸೆ ನೀಡಿದ ಚಂದ್ರಬಾಬು ನಾಯ್ಡು ಅವರು; ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು. ನೀವು ಹೇಳಿದ ಮೂರು ಜಿಲ್ಲೆಗಳ ನೀರಿನ ಸಮಸ್ಯೆ ಬಗ್ಗೆ ನನಗೂ ಮಾಹಿತಿ ಇದೆ ಎಂದರು.
ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ ಸೇರಿದಂತೆ ಆಂಧ್ರ ಪ್ರದೇಶದ ತೆಲುಗುದೇಶಂ, ಜನಸೇನ ಹಾಗೂ ಬಿಜೆಪಿ ಪಕ್ಷಗಳ ಎಲ್ಲಾ ಸಂಸದರು, ರಾಜ್ಯಸಭೆ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
