ಸಮಗ್ರ ಕೃಷಿ ಪದ್ಧತಿ: 6 ಎಕರೆ ಜಮೀನಿನಲ್ಲಿ 80 ಹಣ್ಣಿನ ಗಿಡಗಳು
ಕೋಲಾರ: ಮುಳಬಾಗಿಲು ತಾಲೂಕಿನ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಂತಿರುವ ಕಾಡೇನಹಳ್ಳಿಯ ರೈತರ ಜಮೀನಿನಲ್ಲಿ ರಿಫಾರೆಸ್ಟ್ ಟ್ರಸ್ಟ್ ವತಿಯಿಂದ ಸುಮಾರು 80ಕ್ಕೂ ಹೆಚ್ಚು ವಿವಿಧ ರೀತಿಯ ಹಣ್ಣಿನ ಗಿಡಗಳು ಹಾಗೂ ವಿವಿಧ ರೀತಿಯ ಸಸ್ಯಗಳನ್ನು ಬೆಳೆಯಲಾಗಿದೆ. ಈ ಹಿಂದೆ ಬರುಡಾಗಿದ್ದ ಈ ಜಮೀನಿನಲ್ಲಿ ಇದೀಗ ಹಣ್ಣಿನ ಲೋಕವನ್ನೇ ಸೃಷ್ಟಿಸಲಾಗಿದೆ. ಕುರಿ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಮಾಡುವ ಮೂಲಕ ಸಮಗ್ರ ಕೃಷಿ ಪದ್ಧತಿಯನ್ನು ಇಲ್ಲಿ ನೋಡಬಹುದಾಗಿದೆ.

ಹೌದು.. ರಿಫಾರೆಸ್ಟ್ ಟ್ರಸ್ಟ್ ನವರು ಕಳೆದ ಎರಡು ವರ್ಷಗಳ ಹಿಂದೆ ಕಾಡೇನಹಳ್ಳಿಯ ರೈತರ ಬಳಿ 6 ಎಕರೆ ಜಮೀನನ್ನು ಪಡೆದುಕೊಂಡು ಅದನ್ನು ಅಭಿವೃದ್ಧಿ ಪಡಿಸಿದ್ದಾರೆ. ಅಲ್ಲದೆ ಸರ್ಕಾರದಿಂದ ಸಿಗುವಂತಹ ಯೋಜನೆಗಳನ್ನು ಸಹ ಸದುಪಯೋಗ ಪಡೆಸಿಕೊಂಡು ಕೃಷಿಗೆ ಯೋಗ್ಯವಾದ ರೀತಿಯಲ್ಲಿ ಭೂಮಿಯನ್ನು ಸಿದ್ಧಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ 80ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನಾಟಿ ಮಾಡಿದ್ದಾರೆ. ಈ ಟ್ರಸ್ಟ್ ನ ಮುಖ್ಯ ಉದ್ದೇಶವೆಂದರೆ ರೈತರ ಜಮೀನುಗಳಲ್ಲಿ ವರ್ಷಪೂರ್ತಿ ಒಂದಲ್ಲಾ ಒಂದು ರೀತಿಯ ಹಣ್ಣುಗಳು ಫಸಲು ಬಿಡುತ್ತಿದ್ದರೆ ರೈತರಿಗೆ ಅನುಕೂಲವಾಗುತ್ತದೆ. ಇದರಿಂದ ರೈತರು ನಷ್ಟಕ್ಕೆ ಒಳಗಾಗದೆ ಉತ್ತಮ ಆದಾಯ ಗಳಿಸಲು ಸಹಕಾರಿಯಾಗುತ್ತದೆ ಎಂದು ಟ್ರಸ್ಟ್ ನ ಅಧ್ಯಕ್ಷರಾದ ಜನೆಟ್ ಎಸ್ ಕೆ ಯಜ್ಞೇಸ್ವರನ್ ಹೇಳಿದರು.
ಇನ್ನು ರೈತರ ತೋಟಕ್ಕೆ ಫುಡ್ ಫಾರೆಸ್ಟ್ ಎಂದು ಹೆಸರಿಟ್ಟಿದ್ದು ಇದರಲ್ಲಿ ಮುಖ್ಯವಾಗಿ ಡ್ರ್ಯಾಗನ್ ಫ್ರೂಟ್, ಅವಕೊಡಾ, ಬಿಳಿ ಮಾವು, ಕಪ್ಪು ಮಾವು, ಬಿಳಿ ನೇರಳೆ, ರಾಮಫಲ, ಹನುಮಾನ್ ಫಲ, ಲಕ್ಷ್ಮಣ ಫಲ, ಸೀತಾಫಲ, ಸ್ಟ್ರಾಬೆರಿ, ಪೆಪಿನೊ, ಸ್ಟಾರ್ ಫ್ರೂಟ್, ನಿಂಬೆ ಹಣ್ಣು, ಆರೆಂಜ್, ಮೋಸಂಬಿ, ದ್ರಾಕ್ಷಿ, ಸಪೋಟ ಹಣ್ಣು, ಹಲಸಿನ ಹಣ್ಣು, ತೆಂಗಿನ ಗಿಡ, ಲೆಮನ್ ಗ್ರಾಸ್ (ನಿಂಬೆ ಎಲೆ), ಫೈನ್ ಆಪಲ್, ಆಪಲ್, ಬಿಳಿ ರಾಗಿ, ಸೀಡ್ ಲೆಸ್ ಜಾಮೂನ್, ಪೆಪಿನೊ, ಸಿಟಿ ಲೆಮೆನ್, ಎಗ್ ಪ್ರೂಟ್ಸ್, ಮಿಲ್ಕ್ ಪ್ರೂಟ್, ರೋಸ್ ಮೆರ್ರಿ ಮಶ್ರೂಮ್ ಸೇರಿದಂತೆ ಒಟ್ಟು 80ಕ್ಕೂ ಹೆಚ್ಚು ವಿವಿಧ ತಳಿಯ ಗಿಡಗಳನ್ನು ನಾಟಿ ಮಾಡಿದ್ದಾರೆ. ಈಗಾಗಲೇ ಬಹುತೇಕ ಹಣ್ಣಿನ ಗಿಡಗಳು ಫಸಲು ಬಿಡಲಾರಂಭಿಸಿವೆ.
ರಿಫಾರೆಸ್ಟ್ ಟ್ರಸ್ಟ್ ನ ಸಹಕಾರದೊಂದಿಗೆ ಫುಡ್ ಫಾರೆಸ್ಟ್ ತೋಟದ ನಿರ್ವಹಣೆ ನೋಡಿಕೊಳ್ಳುತ್ತಿರುವ ರಾಜೇಂದ್ರಹಳ್ಳಿಯ ರೈತ ನಾಗರಾಜ್ ಮಾತನಾಡಿ, ಟ್ರಸ್ಟ್ ನವರು ರೈತರಿಂದ ಜಮೀನನ್ನು ಪಡೆದು 10 ವರ್ಷಗಳ ಕಾಲ ಒಪ್ಪಂದ ಮಾಡಿಕೊಳ್ಳುತ್ತಾರೆ. ಅದರಂತೆ ರೈತರ ಜಮೀನುಗಳಲ್ಲಿ ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನಾಟಿ ಮಾಡಿ 10 ವರ್ಷಗಳ ಕಾಲ ಅದರ ನಿರ್ವಹಣೆ ಮಾಡುತ್ತಾರೆ. ಬಳಿಕ ತೋಟವನ್ನು ರೈತರಿಗೆ ವಾಪಸ್ ನೀಡಲಾಗುತ್ತದೆ. ಅಲ್ಲದೆ ಹಣ್ಣಿನ ಗಿಡಗಳ ಬಗ್ಗೆ ರೈತರಿಗೆ ತರಬೇತಿ ನೀಡಿ ಉಚಿತವಾಗಿ ಗಿಡಗಳನ್ನು ನೀಡಲಾಗುತ್ತದೆ. ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ರೈತರಿಗೆ ನಷ್ಟವಾಗದಂತೆ ಹೆಚ್ಚಿನ ಆದಾಯ ತಂದುಕೊಡುವ ಉದ್ದೇಶ ಇವರದಾಗಿದೆ.
