ಗೋವಾದಲ್ಲಿ ಮಿಂಚಿದ ಚಿಕ್ಕಬಳ್ಳಾಪುರದ ವೀರಗಾಸೆ: ಕಲಾವಿದ ನವೀನ್ ಅವರಿಗೆ ‘ಕರುನಾಡ ಪದ್ಮಶ್ರೀ’ ಗೌರವ.
ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರತಿಭಾವಂತ ಜಾನಪದ ಕಲಾವಿದ ನವೀನ್ ವೀರಗಾಸೆ ಅವರಿಗೆ ಗೋವಾದಲ್ಲಿ ನಡೆದ ಸಾಂಸ್ಕೃತಿಕ ಸಮಾರಂಭದಲ್ಲಿ ಪ್ರತಿಷ್ಠಿತ ‘ಕರುನಾಡ ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜಾನಪದ ಕಲೆಯ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಸತತ ಕೊಡುಗೆಯನ್ನು ಪರಿಗಣಿಸಿ ಈ ಗೌರವ ಸಮರ್ಪಿಸಲಾಗಿದೆ.

ಗೋವಾದಲ್ಲಿ ಇತ್ತೀಚೆಗೆ ಅತ್ಯಂತ ವೈಭವದಿಂದ ಜರುಗಿದ 16ನೇ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ, ಕರ್ನಾಟಕದ ವೀರಗಾಸೆ ಕಲೆಯ ಸೌರಭವನ್ನು ಪಸರಿಸಿದ ನವೀನ್ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪರರಾಜ್ಯದಲ್ಲಿ ಕನ್ನಡದ ಗಂಡುಕಲೆ ವೀರಗಾಸೆಯ ಕಂಪು ಬೀರಿದ ಇವರ ಸಾಧನೆಗೆ ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ‘ಕಲಾ ಜ್ಯೋತಿ ಜಾನಪದ ಕಲಾತಂಡದ ನವೀನ್, ಕಳೆದ ಹಲವು ವರ್ಷಗಳಿಂದ ವೀರಗಾಸೆ ಕಲೆಯನ್ನು ಜೀವಂತವಾಗಿರಿಸುವಲ್ಲಿ ಶ್ರಮಿಸುತ್ತಿದ್ದಾರೆ. ಕೇವಲ ಪ್ರದರ್ಶನ ನೀಡುವುದಲ್ಲದೆ, ಯುವ ಪೀಳಿಗೆಗೆ ಈ ಕಲೆಯ ತರಬೇತಿ ನೀಡುವ ಮೂಲಕ ಜಾನಪದ ಪರಂಪರೆಯನ್ನು ಉಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಗೋವಾದ ಸಮ್ಮೇಳನದಲ್ಲಿ ನವೀನ್ ಮತ್ತು ತಂಡದವರು ನೀಡಿದ ವೀರಗಾಸೆ ಪ್ರದರ್ಶನವು ಪ್ರೇಕ್ಷಕರ ಮನ ಗೆದ್ದಿತು. ಲಿಂಗದ ವೀರರ ಸಾಹಸಗಾಥೆ, ಶಿಸ್ತುಬದ್ಧ ಹೆಜ್ಜೆ ಮತ್ತು ಆವೇಶಭರಿತ ನೃತ್ಯವು ಹೊರನಾಡ ಕನ್ನಡಿಗರಿಗೆ ಮತ್ತು ಸ್ಥಳೀಯರಿಗೆ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಚಯಿಸಿತು.
