ಅನ್ಯಧರ್ಮೀಯ ವಿವಾಹಕ್ಕೆ ವಿರೋಧ, 40 ದಿನದ ಶಿಶುವಿನ ಕತ್ತು ಹಿಸುಕಿ ಕೊಂದ ಅಜ್ಜಿ
ಬಾಗೇಪಲ್ಲಿ :- ನೂತನ ತಾಲ್ಲೂಕು ಚೇಳೂರು ಪಟ್ಟಣದಲ್ಲಿ ದುರ್ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕೇವಲ 40 ದಿನದ ಗಂಡು ಶಿಶುವನ್ನು ಕತ್ತು ಹಿಸುಕಿ ಕೊಂದ ಆರೋಪದಲ್ಲಿ ಮೆಹಬೂಬಿ ಎಂಬ ಅಜ್ಜಿಯನ್ನು ಚೇಳೂರು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ 2025 ಡಿಸೆಂಬರ್ 24ರಂದು ನಡೆದಿದ್ದರೂ ನಂತರ ತನಿಖೆಯಲ್ಲಿ ಸತ್ಯ ಹೊರಬಂದಿದೆ.
ಆರಂಭದಲ್ಲಿ ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿರುವುದಾಗಿ ನಂಬಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ ಅನುಮಾನಗೊಂಡ ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಆ ನಂತರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಫೊರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಈ ವೇಳೆ ವರದಿಯಲ್ಲಿ ಶಿಶುವನ್ನು ಉಸಿರುಗಟ್ಟಿಸಿ ಕೊಂದಿರುವುದು ದೃಢಪಟ್ಟಿದೆ. ಪೊಲೀಸರ ತನಿಖೆಯಲ್ಲಿ ಅಜ್ಜಿಯೇ ಈ ಕೃತ್ಯ ಎಸಗಿರುವುದು ಬಹಿರಂಗವಾಗಿದೆ. ಮೊಮ್ಮಗಳು ಅನ್ಯಧರ್ಮದ ಯುವಕನೊಂದಿಗೆ ಪ್ರೇಮವಿವಾಹ ಮಾಡಿಕೊಂಡಿದ್ದುದನ್ನು ಅಜ್ಜಿ ಒಪ್ಪಿಕೊಂಡಿರಲಿಲ್ಲ, ಆ ಕಾರಣಕ್ಕಾಗಿ ಈ ಕೃತ್ಯವೆಸಗಿದ್ದಾಳೆ ಎಂದು ತಿಳಿದುಬಂದಿದೆ
