ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಆಕಸ್ಮಿಕವಾಗಿ ಕುರಿ ಶೆಡ್‌ಗೆ ಬೆಂಕಿ ಬಿದ್ದ ಪರಿಣಾಮ ಸುಮಾರು 35 ರಿಂದ 40 ಕುರಿಗಳು ಸಜೀವ ದಹನವಾಗಿವೆ. ಇದರಿಂದ ರೈತನಿಗೆ ಅಪಾರ ನಷ್ಟ ಉಂಟಾಗಿದೆ.ಈ ದುರದೃಷ್ಟಕರ ಘಟನೆಯು ಗುರುವಾರ ಬೆಳಗಿನ ಜಾವ (ರಾತ್ರಿ 2 ಗಂಟೆ ಸಮಯದಲ್ಲಿ) ಸಂಭವಿಸಿದೆ.

ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ಗ್ರಾಮ ಪಂಚಾಯಿತಿಯ ವರ್ತನಹಳ್ಳಿ ಗ್ರಾಮದ ತಿಮ್ಮಯ್ಯ ಎಂಬ ರೈತರಿಗೆ ಸೇರಿದ ಕುರಿ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಶೆಡ್ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ಸಾರ್ವಜನಿಕರು ಬೆಂಕಿ ನಂದಿಸಲು ಹರಸಾಹಸಪಟ್ಟರು. ಆದರೆ ಅಷ್ಟರಲ್ಲೇ ಬಹುತೇಕ ಕುರಿಗಳು ಸುಟ್ಟು ಕರಕಲಾಗಿದ್ದವು.ಸುಮಾರು 40 ಕುರಿಗಳು ಸಾವನ್ನಪ್ಪಿರುವುದರಿಂದ ರೈತ ತಿಮ್ಮಯ್ಯ ಅವರಿಗೆ ದೊಡ್ಡ ನಷ್ಟ ಸಂಭವಿಸಿದೆ. ಈ ಬಗ್ಗೆ ಮಾತನಾಡಿದ ಶ್ರೀನಿವಾಸ್ ಎಂಬುವವರು, “ಕುರಿ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಸುಮಾರು 40 ಕುರಿಗಳು ಮೃತಪಟ್ಟಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ನಮಗೆ ನ್ಯಾಯವನ್ನು ಒದಗಿಸಿ ಕೊಡಬೇಕು” ಎಂದು ಮನವಿ ಮಾಡಿದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ, ಶ್ರೀನಿವಾಸಪುರ ಪೋಲಿಸ್ ಠಾಣಾ ಇಲಾಖೆಯ ಅಧಿಕಾರಿಗಳು ಹಾಗೂ ಪಶು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ದುರಂತಕ್ಕೆ ನಿಖರ ಕಾರಣ ಏನೆಂಬುದರ ಕುರಿತು ತನಿಖೆ ನಡೆಯುತ್ತಿದ್ದು, ರೈತನಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
